ಧನುರ್ವಾಯು 
	ಕ್ಲಾಸ್‍ಟ್ರಿಡಿಯಮ್ ಟೆಟನಿ ಎಂಬ ಏಕಾಣುವಿನ ಸೋಂಕಿನಿಂದ ದೇಹದಲ್ಲಿ ಬಿಡುಗಡೆಯಾದ ಜೀವಿವಿಷದಿಂದ (ಟಾಕ್ಸಿನ್) ಉದ್ಭವಿಸುವ ಸೆಳೆತಯುಕ್ತವಾದ ತೀವ್ರರೂಪದ ರೋಗ (ಟೆಟನಸ್). ದವಡೆ ಕಟ್ಟು (ಲಾಕ್‍ಜಾ, ಟ್ರಿಸ್‍ಮಸ್) ಪರ್ಯಾಯನಾಮ. ದವಡೆಯ ಸ್ನಾಯುಗಳು ಸೆಟೆತುಕೊಂಡು ಆಗಿಂದಾಗ್ಗೆ ಸೆಳೆತ ತೀವ್ರವಾಗುತ್ತಿದ್ದು ಬಾಯಿ ಬಿಡುವುದಕ್ಕೆ ಅಗದೇ ಹೋಗುವುದರಿಂದ ರೋಗಕ್ಕೆ ಈ ಹೆಸರಿದೆ. ಕ್ಲಾಸ್ ಟ್ರಿಡಿಯಮ್ ಟೆಟನಿ ಸುಮಾರು 4-5 µ (µ=0,001 ಮಿಮೀ) ಉದ್ದದ ದಂಡಾಣು. ಕಾಲ್ನಡೆಗಳ, ಮುಖ್ಯವಾಗಿ ಕುದುರೆಗಳ ಕರುಳಿನಲ್ಲಿ ಇದರ ಸಹಜವಾಸ. ಅವುಗಳ ಮಲದಲ್ಲಿ ವಿಸರ್ಜನೆ ಆಗುತ್ತ ಬಾಹ್ಯಲೋಕದಲ್ಲಿ ಬೀಜರೂಪ (ಸ್ಟೋರ್) ಧರಿಸಿ ಬಹುಕಾಲ ಪರಿಸರದ ಒತ್ತಾಯಗಳನ್ನು ಎದುರಿಸಿ ಜೀವಿಸಿರಬಲ್ಲುದು. ಸ್ವಾಭಾವಿಕವಾಗಿಯೇ ಕಾಲ್ನಡೆಗಳ ಗೊಬ್ಬರ, ಕೃಷಿ ನೆಲದ ಮಣ್ಣು, ಪಟ್ಟಣವಾಸದ ರಸ್ತೆ ಧೂಳು ಇವುಗಳಲ್ಲಿ ಈ ವಿಷಾಣು ಬೀಜರೂಪದಲ್ಲಿ ಹೇರಳವಾಗಿರುತ್ತದೆ. ಮೇಲ್ಮೈಗಾಯದ ಬಿರುಕುಗಳಿಂದ ವಿಷಾಣುಗಳು ದೇಹದ ಒಳಹೊಕ್ಕು ಸೋಂಕು ಉಂಟಾದರೂ ಗಾಯ ಅಳವಾಗಿ ಇಲ್ಲವೇ ನಜ್ಜುಗುಜ್ಜಾಗಿ ಹರಿದು ಹೊಲಸಾಗಿಲ್ಲದಿದ್ದರೆ ಸಾಮಾನ್ಯವಾಗಿ ಸೋಂಕು ವೃದ್ಧಿ ಆಗುವುದಿಲ್ಲ. ಈ ಏಕಾಣುವಿನ ಸೋಂಕಿಗೆ ನೈಸರ್ಗಿಕ ಪ್ರತಿರೋಧ (ನ್ಯಾಚುರಲ್ ಇಮ್ಯೂನಿಟಿ) ಇಲ್ಲ. ತಂಪಾಗಿರುವ ಪ್ರದೇಶಗಳಿಗಿಂತ ಉಷ್ಣಪ್ರದೇಶಗಳಲ್ಲಿ ಸೋಂಕು ಜಾಸ್ತಿ. ಸೋಂಕುವೃದ್ದಿಗೆ ಬೇರೆ ಬೇರೆ ಪ್ರಾಣಿಗಳಲ್ಲಿ ಬೇರೆ ಬೇರೆ ಅವಧಿ ಉಂಟು. ಮಾನವರಲ್ಲಿ ಇದು ಸಾಮಾನ್ಯವಾಗಿ 2ರಿಂದ14ದಿವಸಗಳವರೆಗೆ ಇರುವುದಾದರೂ ಮೂರು ತಿಂಗಳಷ್ಟ ದೀರ್ಘ ಕಾಲಾನಂತರವೂ ಸೋಂಕು ವೃದ್ಧಿಸಬಹುದು. ಕ್ಷುಲ್ಲಕ ಗಾಯಗಳು, ತರಚುವಿಕೆ ಮುಂತಾದ ಸ್ಥಿತಿಗಳಲ್ಲಿ ಈ ವಿಷಾಣುವಿನ ಸೋಂಕು ಉಂಟಾದರೆ ಶೀಘ್ರವಾಗಿಯೇ ಮಾಗಿಹೋಗುವ ಗಾಯದ ಕಲೆಯ ಅಡಿಯಲ್ಲಿ ಬೀಜರೂಪದ ವಿಷಾಣುಗಳು ಹುದುಗಿದ್ದು ಬಹುಕಾಲದ ಬಳಿಕ ಅವು ವೃದ್ಧಿಸಬಹುದು. ಸೋಂಕು ಹೊಕ್ಕ ಗಾಯ ಆಗಿದ್ದ ವಿಷಯವೇ ಅಷ್ಟರಲ್ಲಿ ವ್ಯಕ್ತಿಗೆ ಮರೆತುಹೋಗಿರಬಹುದು. ವಿಷಾಣುವೃದ್ಧಿಯ ಕಾಲದಲ್ಲಿ ಉತ್ಪತ್ತಿಯಾಗುವ ಜೀವಿವಿಷ ಅತಿಥೇಯ ದೇಹದ್ರವಗಳಲ್ಲಿ ವಿಲೀನಕಾರಿಯಾಗಿರುವುದರಿಂದ ದೇಹದಲ್ಲೆಲ್ಲ ವ್ಯಾಪಿಸಿ ಮುಖ್ಯವಾಗಿ ನರಮಂಡಲದಲ್ಲಿ ತತ್ರಾಪಿ ಚಾಲಕ ನರಕಣಗಳಲ್ಲಿ (ಮೋಟರ್ ನರ್ವ್‍ಸೆಲ್ಸ್) ಸಂಗ್ರಹವಾಗುತ್ತದೆ. ಈ ವಿಷ ಬಹು ತೀಕ್ಷ್ಣ. 

	ವಿಷದ ಮೊತ್ತಮೊದಲ ಪರಿಣಾಮ ದವಡೆಕಟ್ಟು. ಮ್ಯಾಸೀಟರ್ ಎಂಬ ಸ್ನಾಯುವಿನ ನಿರಂತರ ಸಂಕೋಚನ (ಟಾನಿಕ್ ಕನ್‍ಟ್ರಾಕ್ಷನ್) ಇದಕ್ಕೆ ಕಾರಣವಾಗಿದ್ದರೂ ಇದು ನೋವುರಹಿತಸ್ಥಿತಿ. ಸೆಳವಿನಿಂದ ಚಲನಸಾಮಥ್ರ್ಯ ನಾಶವಾಗುತ್ತದೆ; ಮತ್ತು ನೋವು ಮುಂದೆ ಕುತ್ತಿಗೆಯಲ್ಲೂ ಅನಂತರ ಮುಖದಲ್ಲೂ ಕಂಡು ಬರುತ್ತದೆ. ಭೂಪ್ರದೇಶ ಹಾಗೂ ಬಾಯಿಮೂಲೆಗಳಲ್ಲಿ ಸ್ನಾಯುಗಳು ಸೆಟೆದುಕೊಳ್ಳುವುದರಿಂದ ಹುಬ್ಬುಗಳು ಮೇಲೇರಿ ಬಾಯಿಮೂಲೆಗಳು ಕೆಳಗೆಳೆದಂತಾಗುತ್ತವೆ. ಇದರ ಪರಿಣಾಮ ಒಂದು ವಿಶಿಷ್ಟ ರೀತಿಯ ಹಾಸ್ಯಾನುಕಾರಿ ಮುಖಭಂಗಿ (ರೈಸಸ್ ಸಾರ್ಡಾನಿಕಸ್). ನುಂಗುವ ಕ್ರಿಯೆಗೆ ಕಾರಣವಾದ ಸ್ನಾಯುಗಳ ಸೆಳೆತವೂ ರೋಗದ ಮೊದಲ ಲಕ್ಷಣಗಳಲ್ಲಿ ಒಂದು. ಮುಂದಕ್ಕೆ ಸೆಳೆತ ಮುಂಡ ಹಾಗೂ ಕೈಕಾಲುಗಳ ಸ್ನಾಯುಗಳಲ್ಲಿ ಕಂಡುಬರುತ್ತದೆ. ದವಡೆ ಕಟ್ಟು ಕಂಡುಬಂದ 12ಗಂಟೆಗಳಷ್ಟರಲ್ಲಿ ಇಂಥ ಸೆಳೆತ ಉಂಟಾಗಬಹುದು. ಒಂದು ವಾರದ ಮೇಲೆ ಕಂಡುಬಂದರೂ ಬರಬಹುದು. ಅಲ್ಲದೆ ಸೆಳೆತ ಅಗಿಂದಾಗ್ಗೆ ತೀವ್ರವಾಗಿ ಬಗ್ಗಿಸಿದ ಧನುಸ್ಸಿನಂತೆ ಮುಂಡದ ವಕ್ರಭಂಗಿಯನ್ನು ಉಂಟುಮಾಡುತ್ತದೆ. ಅದ್ದರಿಂದಲೇ ಈ ರೋಗವನ್ನು ಧನುರ್ವಾಯು ಎಂದು ಕರೆಯಲಾಗಿದೆ. ಮುಂಡ ಹೊಟ್ಟೆ ಮೇಲಾಗಿ ಬಗ್ಗಿ ಸೆಟೆದುಕೊಳ್ಳುವುದೊ (ಒಪಿಸ್ಥೊಟೋನಸ್) ಬೆನ್ನುಮೇಲಾಗಿ ಸೆಟೆದುಕೊಳ್ಳುವುದೊ (ಎಂಪ್ರಾಸ್ಧೊಟೋನಸ್) ಎಂಬುದು ಯಾವ ಸ್ನಾಯುಗಳು ಜೀವಿವಿಷದಿಂದ ಪೀಡಿತವಾಗಿವೆ ಎನ್ನುವುದನ್ನು ಅವಲಂಬಿಸಿದೆ. ರೋಗಿಯನ್ನು ಅಲುಗಾಡಿಸುವುದು, ರೋಗಿ ಮಲಗಿರುವೆಡೆ ಬೆಳಗಿಸುವುದು, ರೋಗಿಯ ನೆರೆಯಲ್ಲಿ ಸದ್ದು ಮಾಡುವುದು-ಇವುಗಳಿಂದ ಪ್ರಾರಂಭವಾದಲ್ಲಿ ರೋಗಿಯ ಪರಿಸ್ಥಿತಿ ಉಲ್ಬಣವಾಗಿ ಸೆಳೆತ ತೀಕ್ಷ್ಣವಾಗಿ ಧನುರ್ವಾಯು ಸ್ಥಿತಿ ಕಂಡುಬರುತ್ತದೆ. ಆದರೆ ರೋಗ ಮುಂದುವರಿದಂತೆ ಈ ಸ್ಥಿತಿ ತಾನಾಗಿಯೇ ಅಗಿಂದಾಗ್ಗೆ ವ್ಯಕ್ತವಾಗುವುದು ಸಾಮಾನ್ಯ. ಇಂಥ ಸೆಳೆತವಲ್ಲದೆ ಗಾಯದ ಸುತ್ತಲಿನ ಸ್ನಾಯುಗಳಲ್ಲೂ ಸೆಳೆತ ಉಂಟಾಗಬಹುದು. ಅದರೆ ಅದು ಅಗಣನೀಯ. ದೇಹದಲ್ಲೆಲ್ಲ ವ್ಯಾಪಿಸಿರುವ ಐಚ್ಛಿಕ ಸ್ನಾಯುಗಳ ಸೆಳೆತ ದೀರ್ಘಕಾಲಿವಾಗಿ ಇರಬಹುದು. ರೋಗ ಸಾಮಾನ್ಯವಾಗಿ ಜ್ವರರಹಿತ. ಅದರೆ ವ್ಯಾಪಕಸೆಳೆತ ಇರುವ ಪ್ರಸಂಗಗಳಲ್ಲಿ ಜ್ವರ, ತಲೆನೋವು, ಬೆನ್ನುನೋವು, ಅರೋಚಿಕ ಮಲಬದ್ಧತೆ, ನಿದ್ರಾಲೋಪ, ಕಾತರಮುಖಭಂಗಿ ಇವು ಕಂಡುಬರಬಹುದು. ಮುಂಡದ ಸೆಳೆತ ರೋಗದ ತರುಣದಲ್ಲೇ ಕಂಡುಬಂದರೆ ಗುಣವಾಗುವ ಸಾಧ್ಯತೆ ಸೆಳೆತ ಎಷ್ಟು ಮುಂಚೆ ಕಂಡು ಬಂದರೆ ಅಷ್ಟು ಕಡಿಮೆ. ರೋಗ ಮಾರಕಸ್ಥಿತಿಯಾಗಿ ಪರಿಣಮಿಸುವುದು ವಯಸ್ಕರಲ್ಲಿ 45%ರಷ್ಟು ರೋಗಿಗಳಲ್ಲಿ ಎಂದು ಅಂದಾಜಾಗಿದೆ. ರೋಗ ಪೀಡಿತ ಮಕ್ಕಳಂತೂ ಬದುಕುವುದು ಅಪರೂಪವೆ. ರೋಗದಲ್ಲಿ ಅತ್ಯುಗ್ರಜ್ವರ ಕಾಣಿಸಿಕೊಳ್ಳುವುದು ಮರಣಸೂಚಕ, ಬಹುವೇಳೆ ಮಾರಕವಾಗುವಷ್ಟು ತೀವ್ರ ರೋಗವಾಗಿದ್ದರೂ ರೋಗಿಗೆ ಯಾವಾಗಲೂ ಜ್ಞಾನ ತಪ್ಪುವುದಿಲ್ಲ. ರೋಗ ವಾಸಿ ಆಗುವುದೇ ಆದರೆ ಸುಮಾರು 3 ವಾರಗಳಲ್ಲಿ ತಾನಾಗಿಯೇ ಗುಣವಾಗುತ್ತದೆ. ನ್ಯುಮೋನಿಯ, ಕಂಠದ್ವಾರ ಸೆಳೆತದಿಂದ ಉಸಿರುಕಟ್ಟಿಕೊಳ್ಳುವುದು, ವ್ಯಾಪಕಸೆಳೆತದಿಂದ ಸಹನಾತೀತ ಸಂಕಟ ಸುಸ್ತುಗಳಾಗುವುದು-ಈ ಕಾರಣದಿಂದ ಗುಂಡಿಗೆ ಸ್ಥಗಿತಗೊಳ್ಳುವುದು ಇತ್ಯಾದಿಗಳು ಮರಣಕ್ಕೆ ಕಾರಣ.  

	ಧನುರ್ವಾಯು ಚಿಕಿತ್ಸೆಗೆ ನಿರ್ದಿಷ್ಟ ಔಷಧವಿಲ್ಲ. ರೋಗ ಬಾರದಂತೆ ತಡೆಗಟ್ಟಲು ಪ್ರತಿಜೀವಿವಿಷ (ಆಂಟಿಟಾಕ್ಸಿನ್) ಅನುಕೂಲವೇ ಹೊರತು ಚಿಕಿತ್ಸೆಗೆ ಅಲ್ಲ. ಗಾಯವಾದ ತರುಣದಲ್ಲೆ, ಸೋಂಕು ವೃದ್ಧಿಯಾಗುವುದಕ್ಕೆ ಮೊದಲೇ, ಪ್ರತಿಜೀವಿವಿಷವನ್ನು ಸೂಜಿಮದ್ದಾಗಿ ಕೊಟ್ಟು ರೋಗ ಬಾರದಂತೆ ನೋಡಿಕೊಳ್ಳುವುದು ಶ್ರೇಷ್ಠ. ಧನುರ್ವಾಯು, ನಾಯಿ ಕೆಮ್ಮು ಮತ್ತು ಡಿಫ್ತೀರಿಯ-ಇವುಗಳಿಂದ ಉತ್ತರೋತ್ತರ ರಕ್ಷಣೆ ಪಡೆಯುವುದಕ್ಕಾಗಿ ಶೈಶವದಲ್ಲಿ ಟ್ರಿಪಲ್ ಆಂಟಿಜೆನ್ ಎಂಬ ಲಸಿಕೆಯನ್ನು ಬಳಸುವುದು 30 -40 ವರ್ಷಗಳಿಂದ ಬಳಕೆಗೆ ಬಂದಿದೆ. ಅಗಿನಿಂದ ಧನುರ್ವಾಯುವಿನ ಹಾವಳಿ ಕಡಿಮೆ ಅಗಿದೆ. ಅದರೆ ಶಿಶುಜನನ ಕಾಲದಲ್ಲಿ, ಇಲ್ಲವೇ ಟ್ರಿಪಲ್ ಅಂಟಿಜೆನ್ನಿನಿಂದ ರಕ್ಷಣೆ ಒದಗಿಸುವುದಕ್ಕೆ ಮುಂಚೆ ಇಲ್ಲವೇ ಹಾಗೆ ಒದಗಿಸಿದ ಮೇಲೂ ಕಾಲಾಂತರದಲ್ಲಿ ರಕ್ಷಣೆ ಸಾಲದೆ ಹೋದಾಗ ಈ ವಿಷಾಣು ಸೋಂಕಿನಿಂದ ಧನುರ್ವಾಯು ಉಂಟಾಗುವುದು ಸಹಜವೇ. ಪ್ರತಿಜೈವಿಕಗಳು (ಅಂಟಿಬಯೊಟಿಕ್ಸ್) ವಿಷಾಣುಗಳನ್ನು ನಾಶಮಾಡುವುವೇ ಹೊರತು ರೋಗಕ್ಕೆ ಕಾರಣವಾದ ಜೀವಿವಿಷವನ್ನು ನಿಷ್ಕ್ರಿಯಗೊಳಿಸಲಾರವು. ಆದ್ದರಿಂದ ಧನುರ್ವಾಯು ಚಿಕಿತ್ಸೆಗೆ ಇವು ಅಷ್ಟು ಉಪಯುಕ್ತವಲ್ಲ. ಅದರೂ ದೊರಕುವಷ್ಟು ಅನುಕೂಲ ದೊರಕಲಿ ಎಂದು ಪ್ರತಿಜೀವಿವಿಷವನ್ನೂ ಪ್ರತಿಜೈವಿಕಗಳನ್ನೂ ಚಿಕಿತ್ಸೆಗಾಗಿ ಬಳಸುವುದು ಉಂಟು. ಇಷ್ಟಲ್ಲದೆ ರೋಗಿಯಲ್ಲಿ ಕಂಡುಬರುವ ಲಕ್ಷಣಗಳಿಗೆ ಅನುಸಾರವಾಗಿ ಉಪಶಮನ ಚಿಕಿತ್ಸಾಕ್ರಮಗಳನ್ನು ಅನುಸರಿಸುವುದು ರೂಢಿ.  

	ಧನುರ್ವಾಯುವಿನ ಮೊದಲ ಲಕ್ಷಣವಾದ ದವಡೆಕಟ್ಟು (ಟ್ರಿಸ್‍ಮಸ್) ತತ್ಫಲವಾಗಿ ತಿನ್ನಲು, ಕುಡಿಯಲು ಮಾತಾಡಲು ಅಸಾಧ್ಯವಾಗುವಿಕೆ ಮಿಕ್ಕ ಹಲವು ರೋಗಗಳಲ್ಲೂ ಕಂಡುಬರಬಹುದು. ಉದಾಹರಣೆಗೆ ಕ್ವಿನ್ಸಿ, ದವಡೆಕೀಲಿನ ರೋಗಗಳು, ಗದ್ದಕಟ್ಟು (ಪೆರೊಟೈಟಿಸ್-ಮಂಪ್ಸ್), ಕೆಲವರಲ್ಲಿ ಬುದ್ಧಿವಂತ ಹಲ್ಲು ಮೊಳೆಯುವಾಗ ಇತ್ಯಾದಿ. ದವಡೆಕಟ್ಟು ಇವುಗಳಿಂದ ಅಲ್ಲವೆಂಬುದನ್ನು ನಿರ್ಧರಿಸಿ ಕೊಂಡು ಕೂಡಲೇ ತಕ್ಕ ಚಿಕಿತ್ಸಾಕ್ರಮಗಳನ್ನು ಪ್ರಾರಂಭಿಸಿದರೆ ಸ್ಥಿತಿ ಸ್ವಲ್ಪ ಅಶಾದಾಯಕವೇನೊ ಎನ್ನಿಸುತ್ತದೆ.  
(ಎ.ಎಸ್.ಎಸ್.ಎಚ್.ಎ; ಎನ್.ಎಸ್.ಎಸ್.ಡಬ್ಲ್ಯೂ.) 

	ಪ್ರಾಣಿಗಳಲ್ಲಿ : ಧನುರ್ವಾಯು ಪ್ರಾಣಿಗಳಿಗೂ ಬಹಳ ಮಾರಕ ರೋಗವೆನಿಸಿದೆ. ಸೆಟೆಬೇನೆ, ಒದ್ದಾಟ ಇವು ಈ ರೋಗದ ಮುಖ್ಯ ಲಕ್ಷಣಗಳು. ಈ ರೋಗ ಜಗತ್ತಿನ ಎಲ್ಲ ದೇಶಗಳಲ್ಲೂ (ಹೆಚ್ಚಾಗಿ ಸಾಗುವಳಿ ಪ್ರದೇಶಗಳಲ್ಲಿ) ಕಂಡು ಬರುತ್ತದೆ. ಇದು ಸಾಕು ಪ್ರಾಣಿಗಳಲ್ಲಿ ಅಪರೂಪಕ್ಕೆ ಕಂಡುಬರುವ ರೋಗವಾಗಿದೆಯಾದರೂ ಕೆಲವು ಸಲ ಹಂದಿಮರಿ ಮತ್ತು ಕುರಿಮರಿಗಳಲ್ಲಿ ಸಾಂಸರ್ಗಿಕ ರೋಗದಂತೆ ಹಬ್ಬುವುದೂ ಉಂಟು.

	ಸೋಂಕು ಹರಡುವಿಕೆ : ಧನುರ್ವಾಯುವಿನ ಏಕಾಣು ಸಾಮಾನ್ಯವಾಗಿ ಪ್ರಾಣಿಗಳ ಮಲದಲ್ಲಿ, ಮುಖ್ಯವಾಗಿ ಕುದುರೆಯ ಮಲದಲ್ಲಿ ಇರುತ್ತದೆಂದು ಹೇಳಿದೆ. ಮಲದೊಡನೆ ಮಣ್ಣಿನಲ್ಲಿ ಇದು ಸೇರಿ ಬಹಳ ಕಾಲದ ವರೆಗೆ ಜೀವಂತವಾಗಿರುತ್ತದೆ. ಪ್ರಾಣಿಗಳಿಗೆ ಹೊಸದಾಗಿ ಗಾಯಗಳಾದಾಗ ಅವುಗಳ ಮೂಲಕ ಈ ಏಕಾಣು ಸೇರಿಕೊಳ್ಳಲು ಅವಕಾಶವಾಗುತ್ತದೆ. ಕುದುರೆಗಳ ಗೊರಸುಗಳಿಗೆ ಚುಚ್ಚುಗಾಯವಾದಾಗ, ಹಸುಗಳು ಕರು ಹಾಕಿದ ಸಂದರ್ಭದಲ್ಲಿ ಈ ಏಕಾಣು ಪ್ರಾಣಿಗಳ ದೇಹದ ಒಳಹೋಗÀುವ ಸಂಭವ ಹೆಚ್ಚು. ಗಂಡು ಹಂದಿ ಮತ್ತು ಗಂಡು ಕುರಿಮರಿಗಳ ಬೀಜ ಒಡೆಯುವಾಗ, ಕುರಿಗಳ ಉಣ್ಣೆಯನ್ನು ಕತ್ತರಿಸುವಾಗ ಆಗಬಹುದಾದ ಗಾಯಗಳ ಮೂಲಕವೂ ಇದು ಆ ಪ್ರಾಣಿಗಳ ದೇಹದೊಳಗೆ ಸೇರುವುದುಂಟು.

	ಏಕಾಣುವು ಗಾಯವನ್ನು ಹೊಕ್ಕು ಸಾಮಾನ್ಯವಾಗಿ ಅಲ್ಲಿಯೇ ಉಳಿಯುತ್ತದೆ. ದೇಹದ ಬೇರೆ ಬೇರೆ ಭಾಗಗಳಿಗೆ ಹರಡುವುದಿಲ್ಲ. ಗಾಯ ತೀವ್ರÀವಾಗಿದ್ದರೆ ಇಲ್ಲವೆ ಗಾಯ ವ್ರಣವಾಗಿದ್ದರೆ ಗಾಯದ ನೆಲೆಯಲ್ಲಿ ಆಕ್ಸಿಜನ್ನಿನ ಪ್ರಮಾಣ ಕುಂಠಿತವಾಗಿ ಏಕಾಣು ಅಲ್ಲಿಯೇ ವೃದ್ದಿಗೊಂಡು ವಿಷವನ್ನು ಹೊರಹಾಕಿ ರೋಗವನ್ನುಂಟು ಮಾಡುತ್ತದೆ. ಇದು ಗಾಯವಾದ ತರುಣದಲ್ಲೇ ಕಂಡುಬರಬಹುದು. ಇಲ್ಲವೆ ಕೆಲಕಾಲಾನಂತರ ಕಂಡುಬರಬಹುದು. ಇದಕ್ಕೆ ಕಾರಣ ಏಕಾಣು ಬೆಳೆಯಲು ಅದರ ಸುತ್ತಮುತ್ತ ಆಕ್ಸಿಜನ್ನಿನ ಪ್ರÀಮಾಣ ಸಾಕಷ್ಟು ಕುಂಠಿವಾಗಬೇಕಾಗಿರುವುದು.

	ಏಕಾಣುವಿನ ಸೋಂಕಿನಿಂದ ಉಂಟಾಗುವ ಜೀವವಿಷ (ಟಾಕ್ಸಿನ್) ನರಗಳ ಮೂಲಕ ಮಿದುಳನ್ನು ಸೇರುತ್ತದೆ. ನರ ಊತಕಗಳ ಮೇಲೆ ಇದು ಉಂಟುಮಾಡುವ ಪರಿಣಾಮ ಎಂಥದು ಎಂಬುದು ಇನ್ನೂ ವಿಶದವಾಗಿಲ್ಲ. ಬಹುಶಃ ಸಂವೇದನೆÀಗಳಿಗೆ ಪ್ರತಿಕ್ರಿಯೆ ತೀವ್ರಗೊಳ್ಳುವುದೆಂದು ತೋರುತ್ತದೆ. ಇತರ ಸಂದರ್ಭಗಳಲ್ಲಿ ವಿಶೇಷ ಪ್ರತಿಕ್ರಿಯೆಯನ್ನು ಉಂಟುಮಾಡದ ಸಾಧಾರಣ ಸಂವೇದನೆಗಳೂ ಅತೀವ ಪರಿಣಾಮಗಳನ್ನು ಉಂಟುಮಾಡಬಹುದು. ಇಂಥ ಕಾಲದಲ್ಲಿ ಫುಪ್ಪುಸದ ಸ್ನಾಯುಗಳಲ್ಲಿ ಬಿಗಿತ ಬಂದು ಉಸಿರು ಕಟ್ಟಿ ಸಾವುಂಟಾಗಬಹುದು.

	ರೋಗದ ಲಕ್ಷಣಗಳು : ಏಕಾಣುವು ಗಾಯಗಳಲ್ಲಿ ಸೇರಿದ ಮೇಲೆ ಒಂದು ವಾರದಿಂದ ಕೆಲವು ತಿಂಗಳ ಅನಂತರ ರೋಗದ ಲಕ್ಷಣಗಳು ಕಾಣತೊಡಗುವುವು. ಕುರಿಗಳಲ್ಲಿ ಬೀಜ ಒಡೆದ ಅಥವಾ ಬಾಲ ಕತ್ತರಿಸಿದ 2 - 10 ದಿನಗಳ ತರುವಾಯ ರೋಗ ಲಕ್ಷಣಗಳು ಗೋಚರವಾಗುವು. ರೋಗಲಕ್ಷಣಗಳು ಎಲ್ಲ ಪ್ರಾಣಿಗಳಲ್ಲೂ ಒಂದೇ ರೀತಿಯಾಗಿವೆ. ಮೊತ್ತಮೊದಲು ಸ್ನಾಯುಗಳು ಬಿಗಿಹಿಡಿದಂತಾಗುವುದಲ್ಲದೇ ಸ್ನಾಯುಗಳು ಆದಿರುವುದಕ್ಕೆ ಪ್ರಾರಂಭಿಸುವುವು. ಮೆಲುಕು ಹಾಕುವುದು ಕಡಿಮೆಯಾಗುತ್ತ ಬಂದು ಕೊನೆಗೆ ಪೂರ್ಣ ನಿಂತುಹೋಗುವುದು. ಕಣ್ಣಿನ ಮುಸಕು ಹೊರ ಹಾಯುತ್ತದೆ. ಹಿಂದಿನ ಕಾಲುಗಳು ಸೆಡೆದು ಜೋಲಿ ಹೋಗುವಂತೆ ಹೆಜ್ಜೆ ಇಡುವುದು ಆರಂಭವಾಗುತ್ತದೆ. ಬಾಲ ಸಹ ಸೆಟೆದು ನಿಂತಿರುತ್ತದೆ. ಸ್ವಲ್ಪ ಸದ್ದಾದರೂ ಪ್ರಾಣಿ ಒಮ್ಮೆಲೆ ಬೆದರುವುದು. ಕಿವಿಗಳನ್ನು ನೆಟ್ಟಗೆ ನಿಲ್ಲಿಸುವುದು ಮತ್ತು ಅದರ ಮೂಗಿನ ಹೊಳ್ಳೆಗಳು ಅತಿಯಾಗಿ ತೆರೆದು ಕೊಂಡಿರುವುದು ಕಂಡುಬರುತ್ತದೆ. ಪ್ರಾರಂಭದಲ್ಲಿ ಪ್ರಾಣಿ ಆಹಾರ ತಿನ್ನುವುದು ಮತ್ತು ನೀರು ಕುಡಿಯುವುದು ಸಹಜವಾಗಿರುತ್ತದೆ. ಆದರೆ ದವಡೆಯ ಸ್ನಾಯುಗಳಲ್ಲಿ ಬಿಗಿತ ಬಂದ ಮೇಲೆ ಮೆಲುಕು ಹಾಕುವುದು ನಿಂತು ಬಾಯಿಂದ ಜೊಲ್ಲು ಸೊರತೊಡಗುತ್ತದೆ. ಒಂದು ವೇಳೆ ಆಹಾರ ಅಥವಾ ನೀರು ಸೇರಿಸಲು ಪ್ರಯತ್ನ ಮಾಡಿದರೆ ಅವು ಮೂಗಿನ ಹೊಳ್ಳೆಗಳಿಂದ ಹೊರಗೆ ಬರುತ್ತವೆ. ಜೊತೆಗೆ ಮಲಬದ್ಧತೆಯೂ ಮೂತ್ರತಡೆಯೂ ಕಂಡುಬರುತ್ತದೆ. ಮೈಯೊಳಗಿನ ಉಷ್ಣತೆ ಮತ್ತು ನಾಡಿಬಡಿತ ಪ್ರಾರಂಭದಲ್ಲಿ ಸಹಜಸ್ಥಿತಿಯಲ್ಲಿ ಇರುತ್ತವಾದರೂ ಸ್ನಾಯುಗಳು ಬಿಗಿ ಹಿಡಿದಾಗ ಉಷ್ಣತೆ ಏರುವುದು ಕಂಡುಬರುತ್ತದೆ. ದನಗಳಲ್ಲಿ ಹೊಟ್ಟೆ ಉಬ್ಬರದಿಂದಾಗಿ ಪ್ರಾಣಿ ಬಹಳ ಒದ್ದಾಡತೊಡಗುತ್ತದೆ.

	ರೋಗ ಬಲಿತಂತೆ ಪ್ರಾಣಿಯ ಕಾಲುಗಳು ನೆಟ್ಟಗೆ ಸೆಟೆದು ನಿಲ್ಲುತ್ತವೆ. ಇದರಿಂದ ಬೆನ್ನೆಲುಬು ಡೊಂಕಾಗಿ ಬಾಲ ಒಂದು ಕಡೆಗೆ ಸರಿದಂತೆ ಕಾಣುತ್ತದೆ. ಪ್ರಾಣಿಗೆ ನಡೆಯಲು ಬಹಳ ತೊಂದರೆಯಾಗುತ್ತದೆ. ಅಲ್ಲದೆ ಬೆದರಿದರೆ ಕೆಳಗೆ ಬೀಳುತ್ತದೆ. ಕೆಳಗೆ ಬಿದ್ದರೂ ಕಾಲುಗಳೆಲ್ಲವೂ ಸೆಟೆದುಕೊಂಡೇ ಇರುವುವು. ಇಂಥ ಪರಿಸ್ಥಿತಿಯಲ್ಲಿ ಜ್ವರ 41ಲಿ ಅ. ವರೆಗೆ ಸಹ ಏರಬಹುದು. ಮೊದಮೊದಲು ಸದ್ದು ಮಾಡಿದರೆ ಅಥವಾ ಮುಟ್ಟಿದರೆ ಮಾತ್ರ ಉಂಟಾಗುವ ಅದಿರಿಕೆ ಕಾಲ ಕ್ರಮೇಣ ಯಾವ ಪ್ರಚೋದನೆಯೂ ಇಲ್ಲದೆ ಉಂಟಾಗತೊಡಗುತ್ತದೆ.

	ರೋಗದ ಗತಿ ವಿವಿಧ ಪ್ರಾಣಿಗಳಲ್ಲಿ ವಿವಿಧ ರಿತಿಯಲ್ಲಿದೆ. ದನ ಮತ್ತು ಕುದುರೆಗಳಲ್ಲಿ ಈ ರೋಗ 5 ರಿಂದ 10 ದಿವಸಗಳ ವರೆಗೆ ಇರುವುದು ಸಾಮಾನ್ಯ. ಕುರಿಗಳಲ್ಲಿ 3 ರಿಂದ 4 ದಿವಸಗಳಲ್ಲಿ ಸಂಭವಿಸಬಹುದು. ಸಾಮಾನ್ಯವಾಗಿ ಈ ರೋಗ ಮಾರಕವಾದುದು. ಆದರೆ ಏಕಾಣು ದೇಹವನ್ನು ಸೇರಿ ಬಹಳ ದಿವಸಗಳ ಅನಂತರ ರೋಗದ ಲಕ್ಷಣಗಳು ಕಾಣತೊಡಗಿದರೆ ರೋಗಸೌಮ್ಯವಾದ್ದೂ ಮಂದಗತಿಯದೂ ಆಗಿದ್ದು ರೋಗಪೀಡಿತ ಪ್ರಾಣಿ ರೋಗದಿಂದ ಪಾರಾಗುವ ಸಂಭವವಿದೆ. ಸಾಯುವ ಕೆಲವು ಘಂಟೆಗಳ ಮುನ್ನ ಸ್ವಲ್ಪ ಸುಧಾರಣೆ ಕಂಡು ಬಂದಂತೆ ಆಗುತ್ತದೆ. ಆದರೆ ಒಮ್ಮೆಯೇ ರೋಗ ಉಲ್ಬಣಿಸಿ ಉಸಿರುಕಟ್ಟಿ ಪ್ರಾಣಹೋಗುವುದು ಸಾಮಾನ್ಯ. ರೋಗ ಸೌಮ್ಯವಾಗಿದ್ದಲ್ಲಿ, ಸ್ನಾಯುಗಳ ಬಿಗಿತ ಕ್ರಮೇಣ ಕಡಿಮೆಯಾಗುತ್ತ ಬಂದು ಕೆಲವು ವಾರಗಳು ಅಥವಾ ತಿಂಗಳುಗಳ ಅನಂತರ ಗುಣವಾಗುವುದು.

	ರೋಗಕಾಲದಲ್ಲಿ ಪ್ರಯೋಗಾಲಯ ಪರೀಕ್ಷೆಗಳಿಂದ ರೋಗವನ್ನು ಪತ್ತೆ ಮಾಡುವ ಖಾತರಿ ವಿಧಾನವಿಲ್ಲ. ಮರಣಾನಂತರ ಸತ್ತ ಪ್ರಾಣಿಗಳ ದೇಹದಲ್ಲಿ ರೋಗದ ಬಗ್ಗೆ ಯಾವ ಮಾಹಿತಿಯೂ ದೊರಕುವುದಿಲ್ಲ. ಆದರೂ ದೇಹದ ಯಾವುದೇ ಭಾಗದಲ್ಲಿ ಗಾಯಗಳು ಇವೆಯೋ ಎಂಬುದನ್ನು ಪತ್ತೆಹಚ್ಚಿ ಅದರ ನೆಲೆಯಲ್ಲಿಯ ಏಕಾಣುಗಳನ್ನು ಕೃತಕ ಮಾಧ್ಯಮದಲ್ಲಿ ಬೆಳೆÀಸಿ ಮರಣಕ್ಕೆ ಈ ರೋಗವೇ ಕಾರಣವೋ ಎನ್ನುವುದನ್ನು ನಿರ್ಧರಿಸಲಾಗುತ್ತದೆ. 

	ಮುಖ್ಯ ಚಿಕಿತ್ಸಾಕ್ರಮಗಳಿವು : 1 ಧನುರ್ವಾಯುಕಾರಕ ಏಕಾಣುವನ್ನು ದೇಹದಿಂದ ನಿರ್ಮೂಲಮಾಡುವುದು. 2 ದೇಹದಲ್ಲಿ ಪಸರಿಸುವ ಜೀವವಿಷವನ್ನು ನಿರ್ಬಾಧಿತವನ್ನಾಗಿ ಮಾಡುವುದು. 3 ಬಿಗಿಯಾದ ಸ್ನಾಯುಗಳನ್ನು ಸಡಿಲ ಮಾಡಿ ಉಸಿರು ಸಿಕ್ಕದ ಹಾಗೆ ಮಾಡುವುದು. 4 ದೇಹದಲ್ಲಿನ ಜೀವವಿಷವೆಲ್ಲ ನಾಶವಾಗುವವರೆಗೆ ಅಥವಾ ಹೊರಗೆ ಬರುವ ವರೆಗೆ ಸಡಿಲಮಾಡಿದ ಸ್ನಾಯುಗಳನ್ನು ಅದೇ ಸ್ಥಿತಿಯಲ್ಲಿಡುವುದು.

	ರೋಗದಿಂದ ಬಳಲುವ ಪ್ರಾಣಿಗೆ ದೊಡ್ಡ ಮೊತ್ತದಲ್ಲಿ ಪೆನಿಸಿಲಿನ್ ಚುಚ್ಚಿ ಧನುರ್ವಾಯು ಏಕಾಣುವನ್ನು ನಾಶಮಾಡಬಹುದು. ಗಾಯವಾದ ಸ್ಥಳ ಪತ್ತೆ ಅದಲ್ಲಿ ಗಾಯವನ್ನು ಹೈಡ್ರೋಜನ್ ಪರಾಕ್ಸೈಡಿನಿಂದ ತೊಳೆದು ಪೆನಿಸಿಲಿನ್ ಮುಲಾಮನ್ನು ಗಾಯಗಳಿಗೆ ಹಚ್ಚಲಾಗುತ್ತದೆ. ಇದಕ್ಕೆ ಮೊದಲು ಪ್ರತಿವಿಷವನ್ನು ಚುಚ್ಚುಮದ್ದಾಗಿ ಪ್ರಯೋಗಿಸಿರಬೇಕಾದ್ದು ಅಗತ್ಯ. ಇಲ್ಲವಾದರೆ ಗಾಯವನ್ನು ಕೆದಕಿದಾಗ ದೇಹದಲ್ಲಿ ಮತ್ತೆ ಸೇರುವ ಜೀವವಿಷ ರೋಗತೀವ್ರತೆಯನ್ನು ಹೆಚ್ಚಿಸುವ ಸಂಭವವಿದೆ. ರೋಗದ ಲಕ್ಷಣಗಳು ಸ್ಪಷ್ಟವಾಗಿ ಕಂಡು ಬಂದ ಮೇಲೆ ಪ್ರತಿ ವಿಷವನ್ನು ಚುಚ್ಚಿದರೆ ಅಷ್ಟೊಂದು ಫಲಕಾರಿಯಲ್ಲ. ಆದರೂ ಅಧಿಕ ಮೊತ್ತದಲ್ಲಿ ಅಂದರೆ ಪ್ರತಿಯೊಂದು ಪೌಂಡು ದೇಹದ ತೂಕಕ್ಕೆ ಕನಿಷ್ಠ 100 IU ಗಳಂತೆ ಪ್ರತಿ 24 ಗಂಟೆಗಳಿಗೆ ಒಮ್ಮೆ ಹಲವಾರು ದಿನಗಳ ವರೆಗೆ ಚುಚ್ಚಿ ಚಿಕಿತ್ಸೆ ನಡೆಸುವುದು ಉಂಟು. ಗಾಯದ ಪ್ರದೇಶದ ಸುತ್ತ ಪ್ರತಿ ವಿಷವನ್ನು ಚುಚ್ಚುವುದು ಒಳ್ಳೆಯದು. ಪ್ರತಿವಿಷವನ್ನು ಮಿದುಳಿಗೆ ಚುಚ್ಚುಮದ್ದಾಗಿ ಕೊಡುವುದೂ ಉಂಟು. ಅದೇ ಕಾಲದಲ್ಲಿ ಯುರೋಟ್ರೋಪಿನ್ನನ್ನು ರೋಗಸ್ಥ ಪ್ರಾಣಿಗೆ ಕೊಟ್ಟರೆ ಒಳ್ಳೆಯದು ಎನ್ನಲಾಗಿದೆ.

	ಸ್ನಾಯುಗಳ ಬಿಗಿತ ಕಡಿಮೆ ಮಾಡಲು ಕ್ಲೋರಲ್ ಹೈಡ್ರೇಟ್ ಮತ್ತು ಮೇಗ್ನೀಸಿಯಮ್ ಸಲ್ಫೇಟ್ ಚುಚ್ಚುವುದು ಬಹಳ ದಿನಗಳಿಂದ ರೂಢಿಯಲ್ಲಿರುವ ಕ್ರಮ. ಆದರೆ ಈಚೆಗೆ ಟ್ಯೂಬೊಕ್ಯುರಾರಿನ್ ಮತ್ತು ಸಕ್ಸಿನೈಲ್ ಕೋಲಿನ್ ಎಂಬವನ್ನು ಕೊಡುವ ಕ್ರಮವನ್ನು ಅನುಸರಿಸಲಾಗಿದೆ. ಆದರೆ ಈ ಔಷಧಿಗಳನ್ನು ಪದೇ ಪದೇ ನಿರ್ದಿಷ್ಟ ವೇಳೆ ಕೊಡಬೇಕಾಗುತ್ತದೆ. ಇಲ್ಲವೇ ಆಭಿಧಮನಿಯೊಳಗೆ ಸೂಜಿ ಚುಚ್ಚಿ ಅದರ ಮೂಲಕ ತೊಟ್ಟು ತೊಟ್ಟಾಗಿ ದೀರ್ಘಕಾಲಿಕವಾಗಿ ಔಷಧ ದೇಹದ ಒಳಹೋಗುವಂತೆ ಏರ್ಪಡಿಸಲÁಗುತ್ತದೆ. ಕ್ಲೋರ್‍ಪ್ರೋಮಜೀನನ್ನ ಕುದುರೆಗಳಲ್ಲಿ ಬಹಳವಾಗಿ ಉಪಯೋಗಿಸಲಾಗುತ್ತಿದೆ. ಈ ಔಷಧಿಯನ್ನು 8 ಅಥವಾ 12 ಗಂಟೆಗಳ ಅಂತರದಲ್ಲಿ 8-12 ದಿನಗಳ ವರೆಗೆ ಚುಚ್ಚಿದರೆ ಧನುರ್ವಾಯು ಪೂರ್ಣ ಕಡಿಮೆಯಾಗುವ ಸಂಭವವುಂಟು.

	ಔಷಧೋಪಚಾರ ಜೊತೆಗೆ ರೋಗದಿಂದ ಬಳಲುವ ಪ್ರಾಣಿ ಸದಾ ಎದ್ದು ನಿಂತಿರುವಂತೆ ಆಧಾರವನ್ನು ಕೊಡಲಾಗುತ್ತದೆ. ಪ್ರಾಣಿ ತಿನ್ನಲು ಅಥವಾ ನೀರು ಕುಡಿಯಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ರಕ್ತನಾಳಗಳ ಮೂಲಕ ಅಥವಾ ಜಠರದೊಳಗೆ ತೂರಿಸಿದ ರಬ್ಬರಿನ ಕೊಳವೆ ಮುಖಾಂತರ ಆಹಾರ ಹಾಗೂ ನೀರನ್ನು ಕೊಡಲು ಪ್ರಯತ್ನಿಸಲಾಗುತ್ತದೆ. ರೋಗದಿಂದ ಬಳಲುವ ಪ್ರಾಣಿಯನ್ನು ಪ್ರತ್ಯೇಕವಾದ ದೊಡ್ಡ ಕತ್ತಲ ಕೋಣೆಯಲ್ಲಿ ದಪ್ಪಗಿನ ಹುಲ್ಲಿನ ಹಾಸಿಗೆಯ ಮೇಲೆ ಇರಿಸಲಾಗುತ್ತದೆ. ಮಲವಿಸರ್ಜನೆಗಾಗಿ ಎನಿಮಾ ಕೊಡುವುದಲ್ಲದೆ ಮೂತ್ರವನ್ನು ರಬ್ಬರ್‍ನ ಕೊಳವೆಯಿಂದ ತೆಗೆಯಲು ಪ್ರಯತ್ನಿಸಲಾಗುತ್ತದೆ.

	ಬೀಜ ಒಡೆಯುವ ಕೂದಲು ಕತ್ತರಿಸುವ ಮತ್ತು ಬಾಲ ಕತ್ತರಿಸುವ ಮೊದಲು ಪ್ರಾಣಿಯ ಚರ್ಮವನ್ನು ಹಾಗೂ ಉಪಯೋಗಿಸುವ ಆಯುಧಗಳನ್ನು ಚೆನ್ನಾಗಿ ಕ್ರಿಮಿನಾಶಕಗಳಿಂದ ತೊಳೆಯುವುದು. ಶಸ್ತ್ರಚಿಕಿತ್ಸೆ ನಡೆಸುವ ಸ್ಥಳ ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು. ಶಸ್ತ್ರಕ್ರಿಯೆ ಮುಗಿದ ಅನಂತರ 1500 - 2000 IU ಧನುರ್ವಾಯು ಪ್ರತಿಜೀವವಿಷವನ್ನು ಚುಚ್ಚುವುದು. ಪ್ರತಿ ವರ್ಷ ಈ ರೋಗ ಬರುವಂಥ ಪ್ರದೇಶಗಳಲ್ಲಿ ಶಕ್ತಿಗುಂದಿಸಿದ ಜೀವವಿಷವನ್ನು ರೋಗರಕ್ಷಕ ಚುಚ್ಚುಮದ್ದಾಗಿ ಉಪಯೋಗಿಸುವುದು - ಇವು ರೋಗ ಹತೋಟಿಯ ಕ್ರಮಗಳು. ಇಂಥ ಒಂದು ಚುಚ್ಚುಮುದ್ದು ಪ್ರಾಣಿಗೆ ಒಂದು ವರ್ಷದ ಸಂರಕ್ಷಣೆ ಕೊಡುತ್ತದೆ. ಮತ್ತೊಂದು ಚುಚ್ಚುಮದ್ದನ್ನು 12 ತಿಂಗಳ ಅನಂತರ ಕೊಟ್ಟರೆ ಆ ಪ್ರಾಣಿಯ ಜೀವಮಾನದವರೆಗೆ ಸಂರಕ್ಷಣೆ ಒದಗುತ್ತದೆ.														(ಆರ್.ಎಫ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ